ಸಯ್ಯಾಜಿರಾವ್, ಗಾಯಕವಾಡ
	1863-1939. ಬಡೋದೆಯ ಗಾಯಕವಾಡ ಮನೆತನದ ಪ್ರಸಿದ್ಧ ದೊರೆ. ಪ್ರಗತಿಶೀಲ, ಸ್ವಾಭಿಮಾನಿ, ವಿದ್ಯಾಪ್ರೇಮಿ. ಕವಳಣೆಯ ಗಾಯಕವಾಡ ಮನೆತನದ ಕಾಶೀರಾವ್ ಮತ್ತು ಆತನ ಪತ್ನಿ ಉಮಾಬಾಯಿ ಇವರ ದ್ವಿತೀಯ ಪುತ್ರ. ಈತನ ಮೊದಲ ಹೆಸರು ಗೋಪಾಲರಾವ್. ಕವಳಣೆಯಲ್ಲಿ 1863 ಮಾರ್ಚ್ 11ರಂದು ಜನಿಸಿದ. ಬಡೋದೆಯ ರಾಜ ಖಂಡೇರಾಯನ ಮರಣಾನಂತರ ಆತನ ಪತ್ನಿ ಜಮನಾಬಾಯಿ ಈತನನ್ನು ದತ್ತಕ ತೆಗೆದುಕೊಂಡು ಸಯ್ಯಾಜಿರಾವ್ ಎಂಬ ಹೊಸಹೆಸರು ಕೊಟ್ಟು ಸಂಸ್ಥಾನಕ್ಕೆ ವಾರಸುದಾರ ನಾಗಿ ಮಾಡಿದಳು (1875). ಆ ರಾಜಮಾತೆ ಬಾಲಕನಿಗೆ ವಿದ್ಯೆ ಕಲಿಸಲು ಎಲಿಯಟ್ ಎಂಬ ಉಪಾಧ್ಯಾಯನನ್ನು ನೇಮಿಸಿದಳು. ಅವರಿಂದ ಈತ ಮರಾಠಿ, ಗುಜರಾತಿ, ಇಂಗ್ಲಿಷ್ ಇತ್ಯಾದಿ ಭಾಷೆಗಳನ್ನು ಚೆನ್ನಾಗಿ ಕಲಿತ. ಅದೇ ಸಮಯದಲ್ಲಿ ದಿವಾನರಾದ ಟಿ. ಮಾಧವರಾವ್ ಅವರು ಇವನು ರಾಜ್ಯಕಾರ್ಯಭಾರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತಿಳಿಯಲು ನೆರವಾದರು. ಈತ 1881 ಡಿಸೆಂಬರ್ 28ರಂದು ಪಟ್ಟಾಭಿಷಿಕ್ತ ನಾದ. ರಾಜ್ಯಾಡಳಿತೆಯ ಭಾರ ಬಿದ್ದಮೇಲೆ ಅದನ್ನು ಅತ್ಯಂತ ಜವಾಬ್ದಾರಿ ಯಿಂದ ನಿರ್ವಹಿಸಿದ. ದಕ್ಷ ಅಧಿಕಾರಿಗಳನ್ನು ನೇಮಿಸಿ ನ್ಯಾಯ, ಆರೋಗ್ಯ, ಪೊಲೀಸ್ ಇತ್ಯಾದಿ ಇಲಾಖೆಗಳಿಗೆ ಸಂಬಂಧಿಸಿದಂತೆ ಉತ್ತಮ ಆಡಳಿತ ವನ್ನು ಜನತೆಗೆ ಒದಗಿಸಿ ಅವರ ಪ್ರಶಂಸೆಗೆ ಪಾತ್ರನಾದ. 

	ಈತ ರಾಷ್ಟ್ರೀಯ ಚಳವಳಿಯ ಧುರೀಣರಾದ ಬಾಲಗಂಗಾಧರ ಟಿಳಕ, ಅರವಿಂದ ಘೋಷ್ ಮೊದಲಾದವರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ತನ್ನ ಆಡಳಿತ ಕಾಲದಲ್ಲಿ  ಬಡೋದ ಸಂಸ್ಥಾನದ ಜನಜೀವನ ದಲ್ಲಿ ಅನೇಕ ಸುಧಾರಣೆ ಜಾರಿಗೆ ತಂದ. ಸಂಸ್ಥಾನದ ಎಲ್ಲ ಕಡೆ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದ. ಉನ್ನತ ವಿದ್ಯಾ ಸಂಸ್ಥೆಗಳನ್ನು ಕಟ್ಟಿದ. ಗ್ರಾಮೀಣ ಗ್ರಂಥಾಲಯಗಳನ್ನು ಪ್ರಾರಂಭಿಸಿದ. ಫೋಷ ಪದ್ಧತಿ ಮತ್ತು ಬಾಲ್ಯವಿವಾಹಗಳನ್ನು ನಿಷೇಧಿಸಿದ. ಅಂತರ್ಜಾತೀಯ ವಿವಾಹಕ್ಕೆ ಮನ್ನಣೆ ನೀಡಿದ. ವಿವಾಹ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಿದ. ಸ್ತ್ರೀಯರಿಗೆ ವಾರಸುಹಕ್ಕು ನೀಡಿದೆ. ಇವು ಈತ ಜಾರಿಗೆ ತಂದ ಕೆಲವು ಸುಧಾರಣೆಗಳು. 

	ಈತ ಕಲಾಭಿಮಾನಿಯಾಗಿದ್ದ. ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ. ತತ್ತ್ವe್ಞÁನ ಪರಿಷದ್, ಸರ್ವಧರ್ಮ ಪರಿಷದ್, ಮರಾಠಿ, ಗುಜರಾತಿ, ಹಿಂದಿ ಭಾಷಾ ಸಮ್ಮೇಳನಗಳ ಅಧ್ಯಕ್ಷನಾಗಿದ್ದು ಅವುಗಳ ಅಭಿವೃದ್ಧಿಗೆ ಕಾರಣನಾದ. ಲಂಡನ್ನಿನಲ್ಲಿ ನಡೆದ ಆರಂಭದ ಎರಡು ದುಂಡುಮೇಜಿನ ಪರಿಷತ್ತುಗಳಲ್ಲಿ ಪಾಲ್ಗೊಂಡಿದ್ದ. ಬ್ರಿಟಿಷ್ ಸರ್ಕಾರ ಈತನಿಗೆ ಫರ್ಜಂಡ್-ಇ-ಖಾಸ್, ದೌಲತ್-ಇ-ಇಂಗ್ಲಿಷ್, ಜಿ.ಸಿ.ಐ.ಇ ಮತ್ತು ಜಿ.ಸಿ.ಎಸ್.ಐ. ಮುಂತಾದ ಬಿರುದುಗಳನ್ನು ನೀಡಿ ಗೌರವಿಸಿತ್ತು. ಈತ 1939 ಫೆಬ್ರುವರಿ 6ರಂದು ನಿಧನನಾದ.	
								
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ